Monday 13 March 2017

ಆದಿತ್ಯ ಹೃದಯಮ್

ಆದಿತ್ಯ ಹೃದಯಮ್

ತತೋ ಯುಧ್ಧ ಪರಿಶ್ರಾಂತಂ
ಸಮರೇ ಚಿಂತಯಾ ಸ್ಥಿತಂ|
ರಾವಣಂ ಚಾಗ್ರತೋ ದೃಷ್ಟ್ವಾ
ಯುದ್ಧಾಯ ಸಮುಪಸ್ಥಿತಂ ||೧||

ರಾವಣನ ಜೊತೆ ಯುದ್ಧ ಮಾಡಿ ಬಳಲಿ, ಚಿಂತೆಯಿಂದ ಯುದ್ಧ ಭೂಮಿಯಲ್ಲಿ ನಿಂತ. ಯುದ್ಧ ಮಾಡಲು ಸಿದ್ಧನಾಗಿ ಮುಂದೆ ನಿಂತ ರಾವಣನನ್ನು ನೋಡಿ ಇವನನ್ನು ಗೆಲ್ಲುವುದು ಹೇಗೆ ಎಂದು ಯೋಚಿಸುತ್ತಿದ್ದ ರಾಮನನ್ನು ನೋಡಿ ಅಗಸ್ತ್ಯರು.

ದೈವತೈಶ್ಚ ಸಮಾಗಮ್ಯ
ದ್ರಷ್ಟುಮಭ್ಯಾಗತೋ ರಣಂ|
ಉಪಾಗಮ್ಯಾಬ್ರವೀದ್ರಾಮಮ್
ಅಗಸ್ತ್ಯೋ ಭಗವಾನ್ ಋಷಿಃ ||೨||

ದೇವತೆಗಳೊಡನೆ ಈ ಅದ್ವಿತಿಯಾದ ಯುದ್ಧವನ್ನು ನೋಡುತ್ತಿದ್ದ ಮಹರ್ಷಿ ಅಗಸ್ತ್ಯರು ಶ್ರೀರಾಮನ ಸಮೀಪ ಬಂದು ಮುಂದೆ ಹೇಳುವಂತೆ ತಿಳಿಸಿದರು.

ರಾಮ! ರಾಮ! ಮಹಾಬಾಹೋ!
ಸೃಣು ಗುಹ್ಯಂ ಸನಾತನಂ|
ಯೇನ ಸರ್ವಾನರೀನ್ ವತ್ಸ|
ಸಮರೇ ವಿಜಯಿಷ್ಯಸಿ ||೩||

ಮಹಾವೀರನಾದ ರಾಮಚಂದ್ರ, ನಾನು ಹೇಳುವ ಈ ಸನಾತನ ರಹಸ್ಯವನ್ನು ಶ್ರಧ್ಧೆಯಿಂದ ಆಲಿಸು. ಇದರಿಂದ ನಿನ್ನ ಎಲ್ಲಾ ಶತೃಗಳನ್ನೂ ಯುದ್ಧದಲ್ಲಿ ಜಯಿಸಬಹುದು.

ಆದಿತ್ಯಹೃದಯಂ ಪುಣ್ಯಂ
ಸರ್ವ ಶತ್ರು ನಾಶನಂ
ಜಯಾವಹಂ ಜಪೇನ್ನಿತ್ಯಂ
ಅಕ್ಷಯ್ಯಂ ಪರಮಂ ಶಿವಂ ||೪||

ಆದಿತ್ಯ ಹೃದಯ ಎಂಬ ಈ ಪುಣ್ಯಕರವಾದ ಸ್ತೋತ್ರ ಶತ್ರುಗಳನ್ನು ನಾಶ ಮಾಡಬಲ್ಲದು. ಸದಾ ಗೆಲುವನ್ನೇ ತಂದುಕೊಡುವುದು. ಶಾಶ್ವತ ಹಾಗೂ  ಮಂಗಳಕರವಾದ ಫಲವನ್ನು ಇದು ತಂದು ಕೊಡುತ್ತದೆ.

ಸರ್ವ ಮಂಗಲ ಮಾಂಗಲ್ಯಂ
ಸರ್ವ ಪಾಪಪ್ರಣಾಶನಂ |
ಚಿಂತಾಶೋಕಪ್ರಶನಂ
ಆಯುರ್ವರ್ಧನಮುತ್ತಮಂ ||೫||

ಮಂಗಳಕರವಾದ ಸ್ತೋತ್ರಗಳಲ್ಲೆಲ್ಲಾ ಇದು ಬಹಳ ಶುಭಪ್ರದವಾಗಿದೆ. ಎಲ್ಲಾ ಪಾಪಗಳನ್ನೂ ಕಳೆಯುವುದು ಈ ಸ್ತೋತ್ರ. ಚಿಂತೆ, ದುಃಖಗಳನ್ನು ಅಡಗಿಸಿ, ಆಯುಸ್ಸನ್ನು ಹೆಚ್ಚಿಸುವ ಉತ್ತಮವಾದ ಮಂತ್ರವಿದು.

("ಸೂರ್ಯಾದಾರೋಗ್ಯವರ್ಧನಂ" ಎಂಬ ಅನುಭವದ ಮಾತು ಇದೆ. ಅಂದರೆ ಸೂರ್ಯ ದೇವನು ಆರೋಗ್ಯಕ್ಕೆ ಕಾರಕ. ಆತನು  ವಿಶ್ವ ಮಾನವರ, ಜಂತುಗಳ ಹಾಗೂ ಪ್ರಾಣಿಗಳ ಆರೋಗ್ಯವನ್ನ ವರ್ಧನ , ಅರ್ಥಾತ್ ಹೆಚ್ಚು ಮಾಡುತ್ತಾನೆ. ಆಯುರ್ವೇದದಲ್ಲಿ ಕೂಡಾ ಸೂರ್ಯ ನಮಃಸ್ಕಾರಕ್ಕೆ ತುಂಬಾ ಪ್ರಾಶಸ್ತ್ಯವಿದೆ. ಸೂರ್ಯ ಕಿರಣಗಳು ಎಂತಹ ಕಾಹಿಲೆಗಳನ್ನೂ ಗುಣ ಪಡಿಸಬಲ್ಲದು. ಬೆಳಗಿನ ಸೂರ್ಯೋದಯದಿಂದ ಹಿಡಿದು ಸುಮಾರು ಒಂದು ಗಂಟೆಯ ಕಾಲದವರೆಗೆ, ಹಾಗೂ ಸಂಜೆಯ ವೇಳೆ ಸೂರ್ಯಾಸ್ತಮದಿಂದ ೧ ಗಂಟೆ ಮುಂಚೆಯ ಕುಳಿತಿದ್ದರೆ, ಅಂದರೆ ಬರಿ ಮೈಗೆ ಸೂರ್ಯನ ಈ ಹೊಂಬಣ್ಣದ ಕಿರಣಗಳನ್ನ ತಾಕಿಸಿದರೆ, ಈ ಕಿರಣಗಳು ಮೈಯ ಚರ್ಮದ ಮೇಲೆ ಬಿದ್ದು, ಚರ್ಮದ ಮೇಲಿನ ಎಗ್ಗೆಸ್ಟೆರೋಲ್ ಎನ್ನುವುದು, ಡಿ- ಜೀವಾತುವಾಗಿ ಪರಿವರ್ತಿಸುವುದು ನಿಮಗೆಲ್ಲಾ ತಿಳಿದ ವಿಚಾರವೇ. ಅಂದರೆ ಈ ಕಿರಣಗಳಿಗೆ ಮೈಯನ್ನ ಒಡ್ಡಿದಲ್ಲಿ, ನಿಮಗೆ ಬೇರೆ ವಿಟಾಮಿನ್ "ಡಿ" ಮಾತ್ರೆಗಳ ಅವಷ್ಯಕತೆ ಇಲ್ಲ. ಆದ್ದರಿಂದಲೇ ಅವನ ಪ್ರಾರ್ಥನೆ ಬಹಳ ಮಂಗಳಕರವಾದದ್ದು.)

ರಶ್ಮಿಮಂತಂ ಸಮುದ್ಯಂತಂ
ದೇವಾಸುರನಮಸ್ಕೃತಂ
ಪೂಜಯಸ್ವ ವಿವಸ್ವಂತಂ
ಭಾಸ್ಕರಂ ಭುವನೇಶ್ವರಂ

ಹೊಮ್ಮುವ ಕಿರಣಗಳನ್ನ ಪಡೆದ, ತನ್ನ ಸಂಪೂರ್ಣ ಬಿಂಬದೊಡನೆ ಮೇಲೆದ್ದು ಬರುವ, ಸುರ-ಅಸುರ ಇಬ್ಬರಿಂದಲೂ ವಂದ್ಯನಾದ, ಪ್ರಕಾಶವನ್ನ ನೀಡುವ, ಈ ಲೋಕಕ್ಕೆ ಸ್ವಾಮಿಯಾದ ಸೂರ್ಯದೇವನನ್ನು ವಂದಿಸು.

(ಸೂರ್ಯ ದೇವ ಕರ್ಮ-ಕಾಲ ಸಾಕ್ಷಿ. ಅವನು ಎಲ್ಲವನ್ನೂ ಸುಟ್ಟು ಹಾಕುತ್ತಾನೆ. ಹೀಗಾಗಿ ಆತನಿಗೆ ದೇವ-ದಾನವ ಭೇದವಿಲ್ಲ. ಎಲ್ಲ ಲೋಕಗಳ ಮೇಲೂ ಆತನದು ಸಮ ದೃಸ್ಟಿ.)

ಸರ್ವ ದೇವಾತ್ಮಕೋ ಹ್ಯೇಷ
ತೇಜಸ್ವಿ ರಶ್ಮಿ ಭಾವನಃ  |
ಏಷ ದೇವಾಸುರಗಣಾನ್
ಲೋಕಾನ್ ಪಾತಿ ಗಭಸ್ತಿಭಿ: ||೭||

ಎಲ್ಲ ದೇವತೆಗಳೂ ಸೂರ್ಯನಲ್ಲಿದ್ದಾರೆ. ಇವನದು ನಿಜವಾದ ತೇಜಸ್ಸು. ಈತನ ಕಿರಣಗಳೇ ಜನರಿಗೆ ಶ್ರೇಯಸ್ಸನ್ನು ಕೊಡುತ್ತದೆ. ತನ್ನ ಶುಭ ಕಿರಣಗಳಿಂದ ದೇವ, ಅಸುರ, ಮಾನವ ಹಾಗೂ ಎಲ್ಲ ಲೋಕಗಳನ್ನೂ ಸೂರ್ಯದೇವನು ಕಾಪಾಡುತ್ತಾನೆ.

( ಸೂರ್ಯಕಿರಣಗಳಲ್ಲಿನ ಸತ್ವಗುಣಗಳು ಅಪಾರ. ಇವು ನಮ್ಮಲ್ಲಿ ಚಟುವಟಿಕೆಯನ್ನು ತುಂಬುತ್ತದೆ. ಆರೋಗ್ಯದ ಕಳೆ ನಮಗೆ ಬರುತ್ತದೆ. ಸೂರ್ಯನ ದೃಸ್ಟಿಯಲ್ಲಿ ಎಲ್ಲರೂ ಸಮಾನರು.)

ಏಷ ಬ್ರಹ್ಮಾ ಚ ವಿಷ್ಣುಶ್ಚ
ಶಿವಃ ಸ್ಕಂದಃ ಪ್ರಜಾಪತಿಃ|
ಮಹೇಂದ್ರೋ ಧನದಃ ಕಾಲೋ
ಯಮಃ ಸೋಮೋ ಹ್ಯಪಾಂಪತಿಃ ||೮||

ಆದಿತ್ಯನಾದ ಸೂರ್ಯ ಎಲ್ಲ ದೇವತೆಗಳ ಪ್ರತಿನಿಧಿ. ಬ್ರಹ್ಮ, ವಿಷ್ಣು , ಶಿವ, ಸುಬ್ರಹ್ಮಣ್ಯ, ಇಂದ್ರ, ಕುಬೇರ, ಯಮ, ವರುಣ, ಸೋಮ ಎಲ್ಲವೂ ಈತನೇ.

ತ್ರಿಮೂರ್ತಿಗಳು, ಅಸ್ಟದಿಕ್ಪಾಲಕರು ಹಾಗೂ ಇತರ ಪ್ರಧಾನ ದೇವತೆಗಳ ಶಕ್ತಿಯಲ್ಲಾ ಸೂರ್ಯನಲ್ಲಿ ಕೇಂದ್ರೀಕೃತವಾಗಿದೆ. ಸೂರ್ಯನಿಲ್ಲದೆ ನೀರಿಲ್ಲ. ನೀರಿಲ್ಲದೆ ಬೆಳೆಯಿಲ್ಲ. ಬೆಳೆಯಿಲ್ಲದೆ ಅನ್ನವಿಲ್ಲ. ಅನ್ನವಿಲ್ಲದೆ ಪ್ರಾಣವಿಲ್ಲ. ಹೀಗಿರುವಾಗ ಸಕಲ ದೇವತೆಗಳ ಶಕ್ತಿ ಸೂರ್ಯನಲ್ಲಿ ಸಾಂದ್ರಿತವಾಗಿದೆ ಎನ್ನುವುದು ಸತ್ಯ.

ಸೃಸ್ಟಿಯನ್ನು ಪ್ರಚೋದಿಸುವ ಬ್ರಹ್ಮ ಶಕ್ತಿಯನ್ನ ಪಾಲನೆಮಾಡಿ ಕೃಪೆ ತೋರುವ ವಿಷ್ಣುಶಕ್ತಿ, ನಿರ್ದೆಯೆಯಿಂದ ನಾಶಪಡಿಸುವಂತಹ ರುದ್ರ ಶಕ್ತಿ ಕೂಡ ಸೂರ್ಯನಲ್ಲಿದೆ. ಎಲ್ಲಾ ದಿಕ್ಕುಗಳಲ್ಲೂ ಸೂರ್ಯನು ತನ್ನ ಕಿರಣವನ್ನ ಬೀರಿ, ಶಕ್ತಿಯನ್ನ ಧಾರೆಯನ್ನ ಎರೆಯುವ ಅಪಾರ ಕರುಣೆ ಆತನಿಗಿದೆ.

(ಸೂರ್ಯನ ಕರುಣೆ, ಕೃಪೆಯಿಂದಲೇ ಈ ಜಗತ್ತು ಉಳಿದಿದೆ. ಅವನ ಚಂಡ ಕಿರಣಗಳಿಂದಲೇ ಇದು ನಾಶವಾದೀತು.

ಪಿತರೊ ವಸವಃ ಸಾಧ್ಯಾ
ಹ್ಯಶ್ವಿನೌ ಮರುತೋ ಮನುಃ|
ವಾಯುರ್ವಹ್ನಿಃ ಪ್ರಜಾಪ್ರಾಣ
ಋತುಕರ್ತಾ ಪ್ರಭಾಕರಃ }}೧೦||

ದೇವತಾಗಣಗಳಾದ ಪಿತೃ, ವಸು, ಸಾಧ್ಯರು, ಮರುತಗಳು, ಅಶ್ವಿನಿದೇವತೆಗಳು, ಮನು, ಅಗ್ನಿ, ಪ್ರಾಣವಾಯು, ಋತುಗಳನ್ನು ತನ್ನ ನಿಯಂತ್ರಣದಲ್ಲಿರಿಸುವ ಪ್ರಭಾಕರ ಎಲ್ಲವೂ ಈತನೇ.

(ದೇವಗಣಗಳ ಹಿಂದಿನ ಚೋದಕ ಶಕ್ತಿ ಸೂರ್ಯದೇವ. ಸೂರ್ಯನಿಲ್ಲದೆ ಈ ಜೀವನ, ಜಗತ್ತು ನಿಸ್ತೇಜ ಹಾಗೂ ಜಡತ್ವವಾಗಿರುತ್ತೆ. ಆಗ ದಿಕ್ಕುಗಳೂ ಅರ್ಥ ಹೀನವಾಗುತ್ತವೆ.)

ಇಲ್ಲಿಂದ ಆದಿತ್ಯ ಹೃದಯ ಮಂತ್ರ ಪ್ರಾರಂಭ:-

ಆದಿತ್ಯಃ ಸವಿತಾ ಸೂರ್ಯಃ
ಖಗಃ ಪೂಷಾ ಗಭಸ್ತಿಮಾನ್|
ಸುವರ್ಣ ಸದೃಶೋ ಭಾನುಃ
ಸ್ವರ್ಣರೇತಾ ದಿವಾಕರಃ

(ಇನ್ನು ಮುಂದೆ ಅಗಸ್ತ್ಯರು ಸೂರ್ಯದೇವನ ಪುಣ್ಯಕರ ನಾಮಗಳನ್ನು ಹೇಳುತ್ತಾರೆ.)

ಆದಿತ್ಯ :- ಅದಿತಿಯ ಪುತ್ರ ಎಂಬರ್ಥವಾದರೂ, ತನ್ನ ಕಡೆಗೆ ಎಲ್ಲರನ್ನೂ ಸೆಳೆಯುವಂತಹ ಚುಂಬಕ ಶಕ್ತಿ ಎಂಬ ಗಹನವಾದ ಅರ್ಥವೂ ಇದೆ. ದಿತಿ, ಸತಿ ಉದರದಿ ಕುತುಕದಿ ಸಾರುತೆ ಹಿತಾಕಾರದಿಂ ಮೆರೆವ , ಮನಕಿದೋ ಮುದವಾದುದು ಅಂತ ನಮ್ಮ ತಂದೆಯವರು ಸಣ್ಣದರಲ್ಲಿ ಹೇಳಿದಂತಹ ನೆನಪು. ಇದರ ಅರ್ಥವೇನೆಂದರೆ,  ದಿತಿಯ ಮಕ್ಕಳು ದೇವತೆಗಳು. ಸತಿಯ ಮಕ್ಕಳು ರಾಕ್ಷಸರು. ಅದೇ ಅದಿತಿಯ ಮಗನು ಸೂರ್ಯ ದೇವನು.
ಸವಿತಾ :- ಸವಿತೃ ಅಂದರೆ ಭೂಮಿಯನ್ನ ಆಳುವವನು ಎಂದರ್ಥ. ಭೂಮಿಯ ಎಲ್ಲಾ ಆಗು ಹೋಗುಗಳಿಗೆ ನಿಯಂತ್ರಕನಾದವನು.
ಸೂರ್ಯ :- ಎಲ್ಲರನ್ನೂ, ಎಲ್ಲವನ್ನೂ ಪ್ರೇರೇಪಿಸುವ, ಚಟುವಟಿಕೆಯನ್ನ ತುಂಬುವವ.
ಖಗ :- ನಭೋ ಮಂಡಲದಲ್ಲಿ ಸಂಚರಿಸುವವ.
ಪೂಷಾ :_ ಲೋಕ ರಕ್ಷಕನಾದ (ಉಪನಿಷತ್ತಿನಲ್ಲಿ "ತತ್ವಂ ಪೂಷನ್ ಅಪಾವೃಣು" ಎಂದಿದೆ. ಸತ್ಯದ ಕಾಂತಿಯುತ ಮುಖವನ್ನು ತೆರೆದು ತೋರಿಸುವ  ದೇವತೆ ಪೂಷನ್)
ಗಭಸ್ತಿಮಾನ್ :- ಶುಬ್ರ ಕಿರಣಗಳನ್ನು ಹೊಂದಿದ ಸೂರ್ಯ ಕಿರಣಗಳ ಕಾಂತಿ ಅನಾದೃಶ.
ಸುವರ್ಣಸದೃಶ:- ಆದಿತ್ಯ ದೇವನ ಕಾಂತಿ ಬಂಗಾರದಂತೆ ಹೊಳೆಯುತ್ತಿದೆ. ಬಂಗಾರ ಎನ್ನುವ ಹೋಲಿಕೆ ನಮಗೆ ಸುಲಭವಾಗಿ ಅರ್ಥವಾಗಲು ಮಾತ್ರ. ಉತ್ತಮ ವಸ್ತುಗಳನ್ನು ಬಂಗಾರದ ಜೊತೆ ಹೋಲಿಸುವುದರಿಂದ ಈ ರೀತಿ ಇಲ್ಲಿ ಹೋಲಿಸಿದ್ದಾರೆ ಅಸ್ಟೆ.
ಭಾನು :- ಎಲ್ಲ ಕಡೆ ಹರಡಿದ ಪ್ರಕಾಶವುಳ್ಳ.
ಸ್ವರ್ಣರೇತಾ :-  ಈ ಬ್ರಹ್ಮಾಂಡವು ಬಂಗಾರದ ಮೊಟ್ಟೆಯಂತೆ ತೇಜಸ್ಸಿನ ಪುಂಜವಾಗಿದೆ. ಇದರ ಸೃಸ್ಟಿ ಆದಿತ್ಯನಿಂದ. ಆತನೇ ಇದಕ್ಕೆ ಮೂಲ ಬೀಜ.
ದಿವಾಕರ:- ಹಗಲು ಆಗುವುದು ಕೂಡ ಸೂರ್ಯನಿಂದಲೇ.

ಹರಿದಶ್ವಃ ಸಹಸ್ರಾರ್ಚಿಃ
ಸಪ್ತಸಪ್ತಿರ್ಮರೀಚಿಮಾನ್   |
ತಿಮಿರೋನ್ಮಥನಃಶಂಭುಃ
ತ್ವಷ್ಟಾ ಮಾರ್ತಾಂಡ ಅಂಶುಮಾನ್ ||೧೧||

(ಆದಿತ್ಯನನ್ನ ಹೀಗೂ ಕರೆಯುವುದುಂಟು.)

ಹರಿದಶ್ವ:- ಈತನ ರಥದ  ಕುದುರೆಗಳ ಬಣ್ಣ ಹಸಿರು. ಹಸಿರು ಸೃಸ್ಟಿಯ ಗೆಲುವಿನ ಸಂಕೇತ.
ಸಹಸ್ರಾರ್ಚಿ:-ಆದಿತ್ಯನ ಕಿರಣಗಳು ಸಾವಿರಾರು. ಅಸಂಖ್ಯ.
ಸಪ್ತಸಪ್ತಿ :- ಈತನ ಕುದುರೆಗಳು ಏಳು. ಇವು ಏಳು ಲೋಕಗಳನ್ನು ಪ್ರತಿನಿಧಿಸುತ್ತವೆ. ಎಲ್ಲ ಕಡೆ ಆದಿತ್ಯನ ಪ್ರಭಾವವಿದೆ.
ಮರೀಚಿಮಾನ್ :- ಕಿರಣಗಳನ್ನು ಮೈದುಂಬಿಕೊಂಡ.
ತಿಮಿರೋನ್ಮಥನ :- ಕತ್ತಲೆಯನ್ನ ಹೊಡೆದಟ್ಟುವ.
ಶಂಭು :- ಸುಖವನ್ನ ದಯಪಾಲಿಸುವ.
ತ್ವಷ್ಟಾ :- ದುಃಖವನ್ನು ಕಳೆಯುವ, ಲವಲವಿಕೆಯನ್ನ ತರುವ.
ಮಾರ್ತಾಂಡ :- ನಾಶ ಹೊಂದಿದ ಬ್ರಹ್ಮಾಂಡದಿಂದೆದ್ದು ಬಂದು ಮತ್ತೆ ಅದನ್ನು ಸೃಸ್ಟಿಸುವವನು.
ಅಂಶುಮಾನ್ :- ವಿಸ್ತಾರವಾದ, ಹರಡಿದ ಕಿರಣಗಳನ್ನು ಹೊಂದಿದವನು.

ಹಿರಣ್ಯಗರ್ಭಃ ಶಿಶಿರಃ
ತಪನೋ ಭಾಸ್ಕರೋ ರವಿಃ
ಅಗ್ನಿಗರ್ಭೋದಿತೇಃ ಪುತ್ರಃ
ಶಂಖಃ ಶಿಶಿರನಾಶನಃ ||೧೨||

ಹಿರಣ್ಯಗರ್ಭ :- ಬ್ರಹ್ಮನ ಶಕ್ತಿ ಪಡೆದ. ತನ್ನೊಳಗೆ ದಿವ್ಯ ಸಂಪತ್ತು, ಜ್ನಾನ ಮತ್ತು ತೇಜಸ್ಸುಗಳನ್ನು ತುಂಬಿಕೊಂಡ.
ಶಿಶಿರ:- ತಂಪುಗೊಳಿಸುವ, ತಾನಿತ್ತ ಮಳೆಯಿಂದ ಭೂಮಿಯನ್ನು ತಂಪಾಗಿಸುವ.
ತಪನ:- ಎಲ್ಲ ಕಡೆ ತಾಪವನ್ನುಂಟುಮಾಡುವ.
ಭಾಸ್ಕರ :-ಪ್ರಕಾಶವನ್ನ ನೀಡುವ.
ರವಿ :- ಎಲ್ಲರಿಂದ ಸ್ತುತ್ಯನಾದ
ಅಗ್ನಿಗರ್ಭ:-ತನ್ನೊಳಗೆ ಅಗ್ನಿಯನ್ನ ಇರಿಸಿಕೊಂಡ
ಆದಿತೇಃಪುತ್ರಃ :- ಅದಿತಿಯ ಮಗ. ಈ ಅದಿತ್ಯನಿಗೆ ಕಶ್ಯಪರು ತಂದೆ. ಅದಿತಿ ತಾಯಿ. ಇವರೇ ಆದಿ ದಂಪತಿಗಳು.
ಶಂಖ :-ಅಸ್ತಮಾನವಾಗುವಾಗ ಶಾಮ್ತಭಾವವನ್ನ ತಾಳುವವ.
ಶಿಶಿರನಾಶನ :-ಮಂಜನ್ನ ಕರಗಿಸುವವನು.

ವ್ಯೋಮನಾಥಸ್ತಮೋಭೇದೀ
ಋಗ್ಯಜುಃಸಾಮಪಾರಗಃ
ಘನವೃಸ್ಟಿರಪಾಂಮಿತ್ರೋ
ವಿಂದ್ಯವೀಥೀಪ್ಲವಂಗಮಃ ||೧೩||

ವ್ಯೋಮನಾಥ :- ಆಕಾಶ-ಗಗನಮಂಡಲಕ್ಕೆ ಸ್ವಾಮಿ ಇವನು.
ತಮೋಭೇದೀ :- ಕತ್ತಲೆಯನ್ನು ಸೀಳಿಕೊಂಡು ಬರುವವ. ಸೂರ್ಯನಿದ್ದಡೆ, ಕತ್ತಲೆಗೆ ಜಾಗವೇ ಇಲ್ಲ. ಅಂತೆಯೇ ಜ್ನಾನವಿದ್ದಲ್ಲಿ ಮೂಢ ನಂಬಿಕೆಗೆ ಜಾಗವಿಲ್ಲ.
ಋಗ್ಯಜುಃಸಾಮಪಾರಗಃ :-ಋಗ್, ಯಜುಸ್, ಸಾಮ ವೆನ್ನುವ ಈ ಮೂರು ವೇದಗಳ ಸಾರವನ್ನ ಅರಿತವನು.
ಘನವೃಸ್ಟಿ :- ಹೆಚ್ಚು, ಹೆಚ್ಚು ಮಳೆಯನ್ನ ತರಿಸುವವ.
ಅಪಾಂಮಿತ್ರೋ:- ನೀರಿನ ಗೆಳೆಯ. ಸೂರ್ಯನ ಪ್ರಭಾವದಿಂದ ಮೋಡಗಳು ಕರಗಿ ನೀರಾಗಿ ಮಳೆ ಸುರಿಯುತ್ತವೆ. ಮತ್ತೆ ಅದೇ ನೀರು ಸೂರ್ಯನ ಪ್ರಭೆಯಿಂದಾಗಿ ಆವಿಯಾಗಿ ಮೋಡವಾಗಿ ಪರಿಣಮಿಸುತ್ತದೆ. ಹೀಗೆ ಸೂರ್ಯ ನೀರಿನ ಮಿತ್ರ. ಅದಕ್ಕೆ ವೇದಗಳಲ್ಲಿ ಸೂರ್ಯನನ್ನು ಮಿತ್ರಾ-ವರುಣ ಎಂಬ ಜೋಡಿದೇವತೆಯನ್ನಾಗಿ ಹೇಳಿದೆ.
ವಿಂದ್ಯವೀಥೀಪ್ಲವಂಗಮಃ :-ವಿಂಧ್ಯ ಪರ್ವತದ ದಾರಿಯಲ್ಲಿ ಬಲು ಬೇಗ ಸಂಚರಿಸುವ (ಸೂರ್ಯನ ಸಂಚಾರ ದಕ್ಷಿಣಾಯನದಲ್ಲಿ ಹೀಗೆ ಇರುತ್ತದೆ.)

ಆತಪೀ ಮಂಡಲೀ ಮೃತ್ಯುಃ
ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ
ರಕ್ತಃ ಸರ್ವಭವೋದ್ಭವಃ ||೧೪||

ಆತಪೀ :- ಬಿಸಿಲು ಉಂಟಾಗುವುದು ಈತನಿಂದಲೇ
ಮಂಡಲೀ:- ಸೂರ್ಯನ ಬಿಂಬ ಗುಂಡಾಗಿದೆ.
ಮೃತ್ಯು :-ಶತೃ ನಾಶಕನಾದ.
ಪಿಂಗಲಃ :-ಈತನ ಬಣ್ಣ ಹಳದಿ.
ಸರ್ವತಾಪನಃ :-ಎಲ್ಲಾ ವಸ್ತುಗಳಿಗೂ ತಾಪವನ್ನ ಕೊಡುವವ.
ಕವಿ :-ಮಹಾನ್ ಜ್ನಾನಿಯಾದ
ವಿಶ್ವ :-ಪ್ರಪಂಚದಲ್ಲೆಲ್ಲಾ ಆವರಿಸಿದ.
ಮಹಾತೇಜಾ :- ಮಹಾನ್ ಕಾಂತಿಹೊಂದಿದ.
ರಕ್ತ:-ಎಲ್ಲರಿಗೂ ಬೇಕಾದವನಾದ, ಎಲ್ಲರ ಪ್ರೀತಿ ಪಾತ್ರನಾದ.
ಸರ್ವಭವೋದ್ಭವಃ :- ಎಲ್ಲ ವಸ್ತುಗಳ ಸೃಸ್ಟಿಗೆ ಕಾರನನಾದವ.

( ಜಗತ್ತಿನ ಸೃಷ್ಠಿಗೆ ಸೂರ್ಯ ದೇವನು ಒಂದಲ್ಲಾ ಒಂದು ರೀತಿ ಕಾರಣನಾಗಿದ್ದಾನೆ. ಎಲ್ಲವೂ ಸೂರ್ಯನಿಂದಲೇ ಪ್ರಚೋದಿತವಾಗಿ ಹೊರಟಿದೆ ಎಂದು  ಅರ್ಥ.)

ನಕ್ಷತ್ರಗ್ರಹತಾರಾಣಾಂ
ಅದಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ
ದ್ವಾದಶಾತ್ಮಾನ್ ನಮೋಸ್ತುತೇ ||೧೫||

ಸೂರ್ಯದೇವನು ನಕ್ಷತ್ರ, ಗ್ರಹ ಮತ್ತು ಎಲ್ಲ ಆಕಾಶ ಕಾಯಗಳಿಗೆ ಒಡೆಯನಾಗಿರುತ್ತಾನೆ. ಆತನೇ ವಿಶ್ವಭಾವನ. ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣ.
ತೇಜಸಾಮಪಿ ತೇಜಸ್ವಿ :- ತೇಜೋವಂತ ವಸ್ತುಗಳಾದ ಅಗ್ನಿ ಮೊದಲಾದವಕ್ಕಿಂತ ತೇಜಸ್ಸನ್ನು ತೇಜಸ್ಸನ್ನು ಹೊಂದಿದವನು.
ದ್ವಾದಶಾತ್ಮನ್:-- ವರ್ಷದ ಹನ್ನೆರಡು ತಿಂಗಳನ್ನ ಪ್ರತಿನಿಧಿಸುವ (೧) ಇಂದ್ರ (೨) ಧಾತಾ (೩) ಭಗ (೪) ಪೂಷನ್ (೫) ಮಿತ್ರ (೬) ಆರ್ಯಮ (೭) ಆರ್ಚಿ (೮) ವಿವಸ್ವಾನ್ (೯) ತ್ವಷ್ಟೃ (೧೦) ಸವಿತಾ (೧೧) ವರುಣ (೧೨) ವಿಷ್ಣು- ಎಂಬೀ ಹನ್ನೆರಡು ರೂಪ ಉಳ್ಳವನು.

ಇಂತಹ ಸೂರ್ಯನಿಗೆ ನಮಃಸ್ಕಾರ.

ನಮಃ ಪೂರ್ವಾಯ ಗಿರಯೇ
ಪಸ್ಚಿಮಾಯಾದ್ರಯೇ ನಮಃ
ಜ್ಯೋತಿರ್ಗಣಾನಾಂ ಪತಯೇ
ದಿನಾಧಿಪತಯೇ ನಮಃ ||೧೬||

ಬೆಳಗಿನ ಹೊತ್ತು ಪೂರ್ವಾದ್ರಿಯಲ್ಲೂ, ಸಂಜೆಯ ಹೊತ್ತು ಪಸ್ಚಿಮಾದ್ರಿಯಲ್ಲಿಯೂ ಶೋಭಿಸುವ , ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ, ಹಗಲಿಗೆ ಸ್ವಾಮಿಯಾದ ಆದಿತ್ಯದೇವನಿಗೆ ನಮಸ್ಕಾರ.

ಜಯಾಯ ಜಯಭದ್ರಾಯ
ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ
ಆದಿತ್ಯಾಯ ನಮೋ ನಮಃ ||೧೭||

ಜಯ :- ಯಶಸ್ಸನ್ನ ಕೊಡುವವನು ಆದಿತ್ಯ
ಜಯಭದ್ರ :- ಯಶಸ್ಸನ್ನು ಹಾಗೂ ಶುಭವನ್ನು ಕೊಡುವವನು.
ಹರ್ಯಶ್ಚ :- ಹಸಿರು ಬಣ್ಣದ ಕುದುರೆಗಳಿರುವ.
ಸಹಸ್ರಾರು :- ಸಾವಿರಾರು ಕಿರಣಗಳಿಂದ
ಆದಿತ್ಯ :- ಅದಿತಿಯ ಪುತ್ರ ಹಾಗು ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಶಕ್ತಿಯುಳ್ಳವನಿಗೆ ನಮನಗಳು.

ನಮಃ ಉಗ್ರಾಯ ವೀರಾಯ
ಸಾರಂಗಾಯ ನಮೋ ನಮಃ
ನಮಃ ಪದ್ಮ ಪ್ರಭೋದಾಯ
ಮಾರ್ತಾಂಡಾಯ ನಮೋ ನಮಃ ||೧೮||

ಉಗ್ರ    :-ಶತೃಗಳಿಗೆ ಭಯಂಕರನೂ
ವೀರ    :- ಅತ್ಯಂತ ಶಕ್ತಿಶಾಲಿಯೂ
ಸಾರಂಗ     :- ವೇಗವಾಗಿ ಚಲಿಸುವವನೂ
ಪದ್ಮಪ್ರಭೋದ :- ಕಮಲ ಪುಷ್ಪಗಳನ್ನು ಅರಳಿಸಬಲ್ಲ ಹಾಗೂ ಜ್ನಾನ ಚಕ್ಷುಷ್ಷನ್ನು ಅರಳಿಸುವವ
ಮಾರ್ತಾಂಡ :- ಲಯದ ನಂತರ ಜಗತ್ತನ್ನು ಸೃಸ್ಟಿಸಲು ಮತ್ತೆ ಜನಿಸುವ ಆದಿತ್ಯನಿಗೆ ನಮಸ್ಕಾರ.

ಬ್ರಹ್ಮೇಶಾನಾಚ್ಯುತೇಶಾಯ
ಸೂರ್ಯಾಯಾದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ
ರೌದ್ರಾಯ ವಪುಷೇ ನಮಃ ||೧೯||

ಬ್ರಹ್ಮ, ವಿಷ್ಣು, ಮಹೇಶ್ವರ ರೆಂಬ ತ್ರಿಮೂರ್ತಿಗಳಿಗೆ ಪ್ರೇರಕ ಶಕ್ತಿಯಾದ, ಎಲ್ಲವನ್ನೂ ಭಕ್ಷಿಸುವ, ಘೋರ ರೂಪವುಳ್ಳ ಆದಿತ್ಯನಿಗೆ ನಮಸ್ಕಾರ. ಆದಿತ್ಯ ದೇವನೇ ಎಲ್ಲರ ಹಿಂದಿನ ಪ್ರೇರಕ ದೈವಶಕ್ತಿ. ಲಯಕಾಲದಲ್ಲಿ ಎಲ್ಲ ಜೀವಿಗಳನ್ನೂ ಭಕ್ಷಿಸಿ ತನ್ನ ಉದರದೊಳಗೆ ಸೇರಿಸಿಕೊಳ್ಳುವ ಶ್ರೀಮನ್ನಾರಾಯಣನು ಆದಿತ್ಯಮಂಡಲದಲ್ಲಿದ್ದಾನೆ.

ತಮೋಘ್ನಾಯ ಹಿಮಘ್ನಾಯ
ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯದೇವಾಯ
ಜ್ಯೋತಿಷಾಂಪತಯೇ ನಮಃ  ||೨೦||

ತಮೋಘ್ನ    :- ಕತ್ತಲೆಯನ್ನು ನಾಶ ಪಡಿಸುವವ
ಹಿಮಘ್ನ     :- ಮಂಜನ್ನ ಕರಗಿಸುವವ
ಶತ್ರುಘ್ನ     :- ಶತ್ರುಗಳನ್ನ ನಾಶ ಮಾಡುವವ
ಅಮಿತಾತ್ಮನೇ    :- ಎಣೆಯಿಲ್ಲದ ಆತ್ಮ ಶಕ್ತಿಯುಳ್ಳ
ಕೃತಘ್ನಘ್ನ     :- ಕ್ರತಘ್ನರಾದವರನ್ನ ಸದೆ ಬಡಿಯುವವ
ಜ್ಯೋತಿಷಾಂಪತಿ:- ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ.
ದೇವ      :- ಪ್ರಕಾಶರೂಪನಾದ ಆದಿತ್ಯನಿಗೆ ನಮೋನಮಃ
ಜ್ಯೋತಿಷಾಂಪತಿ :- ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ

ತಪ್ತಚಾಮೀಕರಾಭಾಯ
ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಭಿನಿಘ್ನಾಯ
ರವಯೇ (ರುಚಯೇ) ಲೋಕಸಾಕ್ಷಿಣೇ  ||೨೧||

ತಪ್ತಚಾಮೀಕರಾಭ  :- ಪುಟಕ್ಕೆ ಹಾಕಿದ ಬಂಗಾರದಂತೆ ಕಾಂತಿಯುಳ್ಳ
ವಹ್ನಯೇ               :- ಅಗ್ನಿಯಂತೆ ಎಲ್ಲ ವಸ್ತುಗಳನ್ನು ದಹಿಸುವ (ಮಾನವನ ಪಚನ ಶಕ್ತಿಯನ್ನು ಪ್ರಚೋದಿಸುವ)
ವಿಶ್ವಕರ್ಮ     :-ಸಕಲ ಕರ್ಮಗಳಿಗೂ ಕಾರಣನಾದ, ಸಾಕ್ಷಿಯಾದ.
ತಮೋಭಿನಿಘ್ನ  :- ಕತ್ತಲೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವವ.
ರವಿ   :- ಎಲ್ಲರ ಮೆಚ್ಚುಗೆಗೆ ಪಾತ್ರನಾದ
ಲೋಕಸಾಕ್ಷಿಣೇ   :- ಜಗತ್ತಿಗೆ ಆಗುಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾದ ಆದಿತ್ಯನಿಗೆ ನಮನ.

ನಾಸಯುತ್ಯೇಷ ವೈಭೂತಂ
ತದೇವ ಸೃಜತಿ ಪಭುಃ |
ಪಾಯತ್ಯೇಷ ತಪತ್ಯೇಷ
ವರ್ಷತ್ಯೇಷ ಗಭಸ್ತಿಭಿಃ ||೨೨||

(ಆದಿತ್ಯ ಹೃದಯದ ನಂತರ ಆದಿತ್ಯ ಮಹಿಮೆಯನ್ನು ಅಗಸ್ತ್ಯರು ತಿಳಿಸುತ್ತಾರೆ.)

ಆದಿತ್ಯ ದೇವನು ಎಲ್ಲ ಜೀವಿಗಳನ್ನ ಸಂಹಾರ ಮಾಡುವ, ಸೃಷ್ಟಿ ಮಾಡುವ ಶಕ್ತಿಯುಳ್ಳವನು. ಇವನೇ ತನ್ನ ಕಿರಣಗಳಿಂದ ಸುಡುತ್ತಾನೆ. ಜಗತ್ತನ್ನು ಒಣಗಿಸಿಯೂ ಬಿಡುತ್ತಾನೆ. ತನ್ನ ಕಿರಣಗಳಿಂದ ಮಳೆ ಸುರಿಸುವವನೂ ಈತನೇ ಆಗಿದ್ದಾನೆ.

ಗಭಸ್ತಿ  :- ಜ್ನಾನವೆಂಬ ಕಿರಣಗಳು. ಮರೀಚಿ ಎಂದರೂ ಇದೇ ಅರ್ಥ.
ವರ್ಷತಿ   :- ಎಂದರೆ ಜ್ನಾನದ ಸಂಪತ್ತನ್ನು ಕರುಣೆಯಿಂದ ಜಗತ್ತಿನ ಮೇಲೆ ಸುರಿಸುತ್ತಾನೆ. ಆದಿತ್ಯ ಮಂಡಲದಲ್ಲಿ ನೆಲಸಿದ ಶ್ರೀಮನ್ನಾರಾಯಣನಿಗೂ ಈ ವಿಶೇಷಣಗಳು ಹೆಚ್ಚು ಔಚಿತ್ಯದಿಂದ ಹೊಂದುತ್ತದೆ.

ಏಷ ಸುಪ್ತೇಷು ಜಾಗರ್ತಿ
ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿ ಹೋತ್ರಂ ಚ
ಫಲಂ ಚೈವಾಗ್ನಿ ಹೋತ್ರಿಣಾಂ ||೨೩||

ಸರ್ವ ಜೀವಿಗಳಲ್ಲಿಯೂ ಇರುವ ಆದಿತ್ಯ ದೇವನು ತಾನು ಸದಾ ಜಾಗ್ರತನಾಗಿ, ಮಲಗಿರುವ ಜೀವಿಗಳನ್ನು ಎಬ್ಬಿಸುತ್ತಾನೆ. ಯಜ್ನ ಎಂಬ ಪದ ಆದಿತ್ಯನ ಹೆಸರೇ. ಯಜ್ನದ ಫಲವನೂ ಆ ದೇವತೆಯೇ ಆಗಿದ್ದಾನೆ.

ವೇದಾಶ್ಚ ಕ್ರತವಶ್ಚೈವ
ಕ್ರತೂನಾಂ ಫಲಮೇವ ಚ
ಯಾನಿ ಕೃತಾನಿ ಲೋಕೇಷು
ಸರ್ವ ಏಷ ರವಿಃ ಪ್ರಭುಃ ||೨೪||

ವೇದಗಳು, ಯಜ್ನಗಳು, ಆ ಯಜ್ನಗಳಿಂದ ದೊರೆತ ಫಲ ಮತ್ತು ಜಗತ್ತಿನಲ್ಲಿ ನಡೆಯುವ ಎಲ್ಲ ಕೆಲಸಗಳ ಹಿಂದೆಯೂ ಆದಿತ್ಯನೇ ಇದ್ದಾನೆ. ಆದಿತ್ಯ ದೇವನು ಸರ್ವಾತ್ಮಕನೆನಿಸಿದ್ದಾನೆ.

ಕಂಪಾಯಿಲ್ಡ್ ಬೈ
ಶ್ರೀ ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೦೪/೦೧/೨೦೧೬

ಆದಿತ್ಯ ಹೃದಯ ಮಂತ್ರದ ಫಲಶ್ರುತಿ

ಏನಮಾಪತ್ಶು ಕೃಚ್ಛ್ರೇಷು
ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಸ್ಚಿತ್
ನಾವಸೀದತಿ ರಾಘವ  | ||೨೫||

ಮೇಲೆ ಹೇಳಿದ ಆದಿತ್ಯ ಹೃದಯವನ್ನು ಕಸ್ಟಕಾಲದಲ್ಲಿ, ಅಪರಿಚಿತವಾದ ಭಯಂಕರ ಕಾಡಿನಲ್ಲಿ ಹೋಗುವಾಗ, ಬಯವುಂಟಾದಾಗ ಹೇಳಿಕೊಳ್ಳುವ ಯಾವ ಪುರುಷನೂ ಕಷ್ಟಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವನಿಗೆ ಎಂದೂ ಕೆಡಕಿಲ್ಲ. ಇದು ಸತ್ಯ.

ಪೂಜಯಸ್ವೈನಮೇಕಾಗ್ರೋ
ದೇವದೇವಂ ಜಗತ್ಪತಿಂ |
ಏತತ್ ತ್ರಿಗುಣಿತಂ ಜಪ್ತ್ವಾ
ಯುದ್ಧೇಷು ವಿಜಯಿಷ್ಯಸಿ ||೨೬||

ಅಗಸ್ತ್ಯರು ಮುಂದುವರಿಸಿದರು:- ದೇವದೇವನಾದ ಆದಿತ್ಯನನ್ನು ಒಂದೇ ಮನಸ್ಸಿನಿಂದ ಪೂಜಿಸು. ಈ ಆದಿತ್ಯ ಹೃದಯವನ್ನು ಮೂರು ಸಲ ಜಪಿಸಿದಲ್ಲಿ, ಯುದ್ಧಗಳಲ್ಲಿ ಜಯಶೀಲನಾಗುವೆ.

(ಶ್ರೀರಾಮನದು ಸೂರ್ಯವಂಶ. ಆದಿತ್ಯದೇವನ ಕರುಣೆಗೋಸ್ಕರ ಅಗಸ್ತ್ಯರು ಆತನಿಗುಪದೇಶಿಸಿದ್ದು ಆದಿತ್ಯಹೃದಯ. ಇದೇ ಶ್ರೀರಾಮನಿಗೆ ಸ್ಫೂರ್ತಿ ನೀಡಿದ ಮಂತ್ರಸದ್ಯ್ರಶ ಸ್ತೋತ್ರರತ್ನ. ಜಗತ್ತಿನ ಅನಿವಾರ್ಯ ಕಾರಣನಾದ ಆದಿತ್ಯದೇವನ ಹಿರಿಮೆ ಇದರಿಂದ ನಮಗೆ ತಿಳಿಯುತ್ತದೆ.)

ಆದಿತ್ಯ ಹೃದಯದ ಎಲ್ಲ ಮಂತ್ರಗಳನ್ನೂ, ಎಲ್ಲ ಪುಣ್ಯನಾಮಗಳನ್ನೂ ಶ್ರೀಮನ್ನಾರಾಯಣನಿಗೆ ಅನ್ವಯ ಮಾಡಬಹುದು. ಸೂರ್ಯ ಮಂಡಲದಲ್ಲಿನ ನಾರಾಯಣನನ್ನು ಆದಿತ್ಯನ ಮೂಲಕ ಧ್ಯಾನಿಸಿ, ಪೂಜಿಸುವುದೇ ಗಾಯತ್ರೀ ಮಂತ್ರದ ರಹಸ್ಯಾರ್ಥ. ಈ ಗಾಯತ್ರೀ ಮಂತ್ರವೇ ನಮ್ಮನ್ನು ಎಲ್ಲ ಕುತ್ತುಗಳಿಂದ ಪಾರುಮಾಡಬಲ್ಲದು. ದೈವ ಮಾರ್ಗದ ಕಡೆ ದಾರಿತೋರಬಲ್ಲದು.

ಅಸ್ಮಿನ್ ಕ್ಷಣೇ, ಮಹಾಬಾಹೋ |
ರಾವಣಂ ತ್ವಂ ವಧಿಷ್ಯಸಿ|
ಏವಮುಕ್ತ್ವಾ ತತೋಗಸ್ತ್ಯೋ
ಜಗಾಮ ಸ್ ಯಥಾಗತಂ ||೨೭||

ಅಗಸ್ತ್ಯರು ಶ್ರೀರಾಮನಿಗೆ ಧೈರ್ಯ ತುಂಬಿದರು. ಈ ಕ್ಷಣದಲ್ಲಿಯೇ ರಾವಣನನ್ನು ನೀನು ಕೊಲ್ಲುತ್ತೀ. ಹೀಗೆ ಹೇಳಿ ಬಂದಂತೆಯೇ ಹೊರಟುಹೋದರು. ಆದಿತ್ಯಹೃದಯದ ಉಪದೇಶಕ್ಕಾಗಿಯೇ ರಾಮನ ಬಳಿ ಅಗಸ್ತ್ಯ ಮಹಾಮುನಿಗಳು ಬಂದದ್ದು. ದುಷ್ಟ ಸಿಕ್ಷಣದ ಮಹಾನ್ ಕಾರ್ಯದಲ್ಲಿ ದೈವ ಬಲದ ಜೊತೆ ತಮ್ಮ ತಪೋಬಲದ ಪ್ರೋತ್ಸಾಹವನ್ನೂ ಅವರು ನೀಡಿದರು.

ಏತಚ್ಛ್ರುತ್ವಾ ಮಹಾತೇಜಾ
ನಷ್ಟಶೋಕೋಭವತ್ತದಾ|
ಧಾರಯಾಮಾಸ ಸುಪ್ರೀತೋ
ರಾಘವಃ ಪ್ರಯತಾತ್ಮವಾನ್ ||೨೮||

ಅಗಸ್ತ್ಯರ ಉಪದೇಶವನ್ನು ಶ್ರಧ್ಧೆಯಿಂದ ಆಲಿಸಿದ ರಾಮಚಂದ್ರ ಮಹಾತೇಜಶಾಲಿಯಾಗಿ ಬೆಳಗಿ, ತನ್ನ ಅಧೈರ್ಯವನ್ನು ಬಿಟ್ಟನು. ಸಂತೋಷದಿಂದ, ಹೊಸ ಹುರುಪಿನಿಂದ, ಈ ಆದಿತ್ಯ ಹೃದಯವನ್ನು, ಮನಸ್ಸಿನಲ್ಲಿ ನೆಲೆ ಮಾಡಿಕೊಂಡು ಧ್ಯಾನಿಸತೊಡಗಿದನು.

( ಯಾವುದೇ ಕಾರ್ಯಕ್ಕಾಗಲೀ ಮಂತ್ರ ಬಲದ ಜೊತೆಗೆ ಏಕಾಗ್ರತೆ ಹಾಗೂ ಮನೋಬಲ ಅಗತ್ಯ ಎಂಬ ಅರ್ಥ ಇಲ್ಲಿ ಸೂಚಿತವಾಗಿದೆ.

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾತು
ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ
ಧನುರಾದಾಯ ವೀರ್ಯವಾನ್ ||೨೯||

ಆದಿತ್ಯನನ್ನು ನೋಡುತ್ತಾ, ಆದಿತ್ಯ ಹೃದಯವನ್ನು ಜಪಿಸಿ, ಸಂತೋಷ ಚಿತ್ತದಿಂದ ಕೂಡಿದ ಶ್ರೀರಾಮಚಂದ್ರನು ಮೂರು ಸಲ ಆಚಮನವನ್ನ ಮಾಡಿ, ಶುಚಿರ್ಭೂತನಾಗಿ ಹೊಸ ಶಕ್ತಿಯಿಂದ ಕೂಡಿ, ಧನುಸ್ಸನ್ನು ಯುಧ್ಧಕ್ಕೆ ಅಣಿಮಾಡಿದನು.

(ಆದಿತ್ಯ ಹೃದಯ ಮಂತ್ರೋಪದೇಶ, ಹಾಗೂ ಅದರ ಜಪ ಶ್ರೀರಾಮನಲ್ಲಿ ಹೊಸ ಉತ್ಸಾಹ ತುಂಬಿತು. ಆತ್ಮ ಸ್ಥೈರ್ಯ ಹೆಚ್ಚಿತು. ರಾವಣನನ್ನು ನಿಶ್ಚಯವಾಗಿ ಕೊಲ್ಲಬಲ್ಲೆ ಎಂಬ ಧೈರ್ಯ ಮೂಡಿತು.

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ
ಯುಧ್ಧಾಯ ಸಮುಪಾಗತಂ |
ಸರ್ವ ಯತ್ನೇನ ಮಹತಾ
ವಧೇ ತಸ್ಯ ಧೃತೋಭವತ್ ||೩೦||

ಯುದ್ಧ ಮಾಡಲು ಸಿದ್ಧನಾಗಿ ಬಂದ ರಾವಣನನ್ನು ನೋಡಿ ಹರ್ಷದಿಂದ ಕೂಡಿದವನಾದ ಶ್ರೀರಾಮನು ತನ್ನ ಪ್ರಯತ್ನವನ್ನು ಒಟ್ಟುಗೂಡಿಸಿ, ಆ ರಾವಣನನ್ನ ಸಂಹಾರ ಮಾಡುವುದಾಗಿ ಸಂಕಲ್ಪವನ್ನ ಮಾಡಿದನು.

(ರಾವಣ ವಧೆ ಎಂಬುದು ಸಾಮಾನ್ಯವಲ್ಲ. ಎಲ್ಲರಿಂದಲೂ ಅವಧ್ಯ ಎಂದು ವರ ಪಡೆದ ಈ ಮಹಾನ್ ತಪಸ್ವಿಯನ್ನು ಕೊಲ್ಲಲು ಮಹಾನ್ ತಪಸ್ವಿ, ಬ್ರಹ್ಮ ಜ್ನಾನಿಯಾದ ಅಗಸ್ತ್ಯರ ನೆರವು ಶ್ರೀಮನ್ನಾರಯಣನಾದ ಶ್ರೀ ರಾಮನಿಗೂ ಬೇಕಾಗಿ ಬಂತು. ಇದು  ಭಗವಾನ್ ಶ್ರೀರಾಮಚಂದ್ರ ಲೋಕಕ್ಕೆ ಹಾಕಿ ಕೊಟ್ಟಂತಹ ಮೇಲ್ಪಂಕ್ತಿ. ಗುರುವಿನ ಅನುಗ್ರಹ, ಉಪದೇಶಕ್ಕೆ ಇರುವಂತಹ ಮಹಾನ್ ಸ್ತಾನ ಇದರಿಂದ ಸ್ಪಷ್ಠವಾಗುತ್ತದೆ. ಇದೊಂದು ಲೋಕೋತ್ತರ ಉದಾಹರಣೆ ಎನಿಸಿಕೊಂಡಿದೆ.)

ಅಥರವಿರವದನ್ನಿರೀಕ್ಷ್ಯರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ ||೩೧||

|| ಇತಿ ಶ್ರೀಮದ್ರಾಮಾಯಣೇ ಯುಧ್ಧಕಾಂಡೇ
ನಾಮ ಸಪ್ತೋತ್ತರ ಶತತಮಃ ಸರ್ಗಃ ||

ಆದಿತ್ಯ ಹೃದಯಂ ಸಂಪೂರ್ಣಂ

(ಶ್ರೀ ರಾಮನ ಜಪಬಲದಿಂದ ಆದಿತ್ಯದೇವನು ಪ್ರತ್ಯಕ್ಷನಾಗುತ್ತಾನೆ. ರಾಮಚಂದ್ರನಿಗೆ ಪ್ರೋತ್ಸಾಹ, ಮನೋಬಲ ನೀಡಿ ಹರಸುತ್ತಾನೆ. ).
ಶ್ರೀರಾಮನನ್ನು ನೋಡಿ ಮನದುಂಬಿ, ಸಂತಸದಿಂದ ಕೂಡಿದ ಆದಿತ್ಯ ದೇವನು ಎಲ್ಲ ದೇವತೆಗಳ ಸಮೂಹದಲ್ಲಿ ತಾನೂ ನಿಂತು, ಬೇಗ ಯುದ್ಧ ಮಾಡು ಎಂಬ ಮಾತನ್ನು ಹೇಳಿದನು.
(ದೇವತಾ ಕಾರ್ಯದ ಸಿಧ್ಧಿಗೋಸ್ಕರ, ಭೂಮಿಯ ಮೇಲೆ ಅವತರಿಸಿದ ಶ್ರೀರಾಮನ ಜಯಕ್ಕಾಗಿ ಎಲ್ಲ ದೇವತೆಗಳೂ ಒಂದಲ್ಲ ಒಂದು ರೀತಿ ಸಹಕರಿಸಿದರು. ಇದರಲ್ಲಿ ಆದಿತ್ಯನ ಪಾತ್ರ ತುಂಬಾ ಹಿರಿದು. ಶ್ರೀರಾಮಾವತಾರದ ಉದ್ದೇಶ ದುಷ್ಟ ಸಂಹಾರ, ರಾವಣ ವಧೆ. ಇದರಲ್ಲಿ ಒದಗಿದಂತಹ ಕ್ಲೇಶವನ್ನು ಪರಿಹರಿಸಿ ರಾಮನಲ್ಲಿ ಹೊಸ ಶಕ್ತಿ ಮೂಡಿಸಿದವನೇ ಸೂರ್ಯದೇವ.)
ಆದಿತ್ಯ ಹೃದಯದ ಮಂತ್ರವು ಎಂತಹ ಕಸ್ಟಗಳನ್ನಾದರೂ ಬಗೆ ಹರಿಸುವ ಶಕ್ತಿಯನ್ನ ಹೊಂದಿದೆ.
ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ೧೦೭ನೆಯ ಸರ್ಗವಾದ ಆದಿತ್ಯ ಸ್ತೋತ್ರ ಮುಗಿಯಿತು.


ಕಂಪಾಯಿಲ್ಡ್ ಬೈ
ಶ್ರೀ ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೦೪/೦೧/೨೦೧೬

No comments:

Post a Comment